ನಗೆಯ ಮಾರಿತಂದೆ: -
ಸು.1160. ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದಲ್ಲಿದ್ದ ಶಿವಶರಣರಲ್ಲಿ ಒಬ್ಬ. ಬಸವಣ್ಣನ ಸಮಕಾಲೀನ. ವಚನಕಾರ. ಜಾತಿಯಲ್ಲಿ ಕುಂಬಾರನಿದ್ದಿರಬೇಕು. ನಗದವರನ್ನು ನಗಿಸುವುದೇ ಈತನ ವೈಶಿಷ್ಟ್ಯವಾಗಿತ್ತು. ನಿತ್ಯವೂ ಒಬ್ಬೊಬ್ಬ ಶರಣನನ್ನು ಕಂಡು ನಗಿಸುವುದೆಂದು ಈತ ನಿರ್ಧರಿಸಿದ್ದಲೆನ್ನಲಾಗಿದೆ. ಈತನ ಹಾಸ್ಯ ಪರಿಣತಿಯನ್ನು ಪರೀಕ್ಷಿಸಲು ಶಿವನೇ ವೃದ್ಧ ಜಂಗಮವೇಷದಿಂದ ಪಾರ್ವತಿಸಹಿತನಾಗಿ ಭೂಮಿಗೆ ಬಂದಾಗ ನಗೆಯ ಮಾರಿತಂದೆ ನಿಂದಾಸ್ತುತಿಯ ಮೂಲಕ ಶಿವನನ್ನು ಅರ್ಚಿಸಿ, ಕುಣಿದು ಕುಕ್ಕಿಲಿರಿದು, ವಿದೂಷಕ ಪ್ರತಿಭೆಯಿಂದ ಶಿವನನ್ನು ನಗಿಸಿದನೆನ್ನಲಾಗಿದೆ.
ಈತನ ವಚನಗಳ ಅಂಕಿತ ಆತುರವೈರಿ ಮಾರೇಶ್ವರಾ. ವಚನಗಳ ಸಂಖ್ಯೆ ಒಂದು ನೂರು.
ಪರಿಚಿತ ಉಪಮೆಗಳು, ಸರಳವಾದ ಭಾಷೆ, ನೇರವಾದ ಶೈಲಿ-ಇವು ಈತನ ವಚನಗಳ ವೈಶಿಷ್ಟ್ಯ.
ತಾ ಹೊಂದುವಾಗ ಕೈದು ಬಾ ಎಂದು ಕರೆದುದುಂಟೆ ಅಯ್ಯ

ತಡಿಯಲ್ಲಿದ್ದು ಮಡುವಿನಲ್ಲಿ ಬೀಳುವಾಗ, ಆ ಮಡು ಒಡಗೂಡುವ ಬಾ ಎಂದು ಕರೆಯಿತ್ತೆ:
ತಮವಡಸಿದ ನಿಳಯಕ್ಕೆ ಕರೆಯಿತ್ತೆ ಜ್ಯೋತಿಯ

ನೀ ಬಂದ ಮಣಿಹಕ್ಕೆ ಎನ್ನ ಇರಲೀಸೆಯೆಂದು ಆಕಸ್ಮಿಕದಲ್ಲಿ ಆತುರವೈರಿ ಮಾರೇಶ್ವರಾ
ಮೇಲುವರ್ಗದವರನ್ನು ಕುರಿತ ಹರಿತವಾದ ವ್ಯಂಗ್ಯವನ್ನು ಇಲ್ಲಿ ಕಾಣಬಹುದು. ಸಾದೃಶ್ಯಗಳಲ್ಲಿ ಹೊಂದಾಣಿಕೆಯಿರುತ್ತದೆ. ಉಪದೇಶಕ್ಕೂ ನಡೆಗೂ ಇರುವ ವ್ಯತ್ಯಾಸವನ್ನು ವಿಡಂಬಿಸುವ ಒಂದು ವಚನ ಹೀಗಿದೆ:
ಸಮತೆಯ ಸಮಾಧಾನ ಹೇಳುವ ಪುಸ್ತಕ ಎತ್ತಿನ ಮೇಲೆ;

ಹೊಯಿದೆಣ್ಣೆ ಕೈಯಲ್ಲಿ ಲೇಸಾಯಿತ್ತು
ಈತನಿರವು, ಮಾತಿನಲ್ಲಿ ಆಗಮ ಮನದಲ್ಲಿ ತೂತಿನ ಕುಡಿಕೆಯ ಆಸೆ
ಇದು ನೀತಿಯಲ್ಲ, ಆತುರವೈರಿ ಮಾರೇಶ್ವರಾ

ಧರ್ಮಗ್ರಂಥಗಳನ್ನು ಹೇರಿಕೊಂಡು ಹೋಗುವ ಎತ್ತನ್ನೇ ಅಗತ್ಯ ಬಿದ್ದರೆ ದಂಡಿಸಲು ಕೈಯಲ್ಲಿ ದೊಣ್ಣೆಯನ್ನು ಸಿದ್ಧಪಡಿಸಿಕೊಂಡು ಹೊರಟಿರುವ ಧರ್ಮೋಪದೇಶಕನ ಇಲ್ಲಿನ ಚಿತ್ರ ಸೊಗಸಾಗಿದೆ. ಮಾತಿನಲ್ಲಿ ಆಗಮ ವಿಚಾರದ ಸಂದೇಶ ಬಿತ್ತರಿಸುವ ಇಂಥವರು ಮನಸ್ಸಿನಲ್ಲಿ ಮೆಲುಕು ಹಾಕುವ ವಿಚಾರಗಳೇ ಬೇರೆ ಇರುತ್ತವೆ; ಮಾತಿನ ಮೋಡಿಯೆಲ್ಲ ಮುಗ್ಧರನ್ನು ವಂಚಿಸುವುದಕ್ಕೆ, ಇದೇ ಬಾವವನ್ನು ಒಂದು ಪ್ರತಿಮೆಯ ಮೂಲಕ ಮತ್ತೊಂದು ವಚನದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ:

ಕಲ್ಲಿಯ ಹಾಕಿ ನೆಲ್ಲ ತಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ
ವಾಗದ್ವೈತವ ಕಲಿತು ಸಂಸ್ಕøತದ ಪಸರವ ಮುಂದೆ ಇಕ್ಕಿಕೊಂಡು
ಮಂತ್ರದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಅದೇತರ ನುಡಿ, ಮಾತಿನ ಮರೆ ಆತುರವೈರಿ ಮಾರೇಶ್ವರಾ

ಬತ್ತದ ಆಸೆಯನ್ನು ಕೆಳಗೆ ಒಡ್ಡಿ ಮೇಲೆ ಬಲೆಯನ್ನು ಕವಿಸಿ ಏನೂ ಅರಿಯದ ಗುಬ್ಬಿಗಳನ್ನು ಹಿಡಿಯುವ ನಯವಂಚಕರಂತೆ, ಅದ್ವೈತ ಮುಂತಾದ ಸಿದ್ಧಾಂತಗಳ ಮತ್ತು ಸಂಸ್ಕøತ ಭಾಷೆಯ ಆಕರ್ಷಣೆ ಒಡ್ಡಿ ಮುಗ್ಧಜನತೆಯನ್ನು ಮೋಸಕೆ ಗುರಿಪಡಿಸುವ ಪಂಡಿತರನ್ನು ಇಲ್ಲಿ ವಿಡಂಬಿಸಲಾಗಿದೆ. ಗುಬ್ಬಿ ಬೇಟೆಗಾರನ ಆಹಾರವಾದಂತೆ ಸಾಮಾನ್ಯ ಜನತೆಯ ದುಡಿಮೆ ಪುರೋಹಿತವರ್ಗದ ಬಾಳೆ ಎಲೆಯಲ್ಲಿ ಅನ್ನವಾಗುತ್ತದೆ. ಸ್ವತಃ ಸಾಮಾನ್ಯ ವರ್ಗದಿಂದ ಬಂದ ಈತನ ಆಕ್ರೋಶ ಇಂಥ ವಚನಗಳಲ್ಲಿ ನಿಗಿನಿಗಿ ಉರಿಯುತ್ತದೆ.								(ಕೆ.ಎಂ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ